ಚಾಡ್ ಸರೋವರ-
ಮಧ್ಯ ಆಫ್ರಿಕದ ಒಂದು ಸರೋವರ. ಉ.ಅ.12-15'-14-10' ಮತ್ತು ಪೂ.ರೇ. 13˚-15˚ ನಡುವೆ ಇದೆ. ನೈಜೀರಿಯ, ನೈಜರ್, ಕ್ಯಾಮರೂನ್ ಮತ್ತು ಚಾಡ್ ಗಣರಾಜ್ಯಗಳ ಎಲ್ಲೆಗಳ ಮೇಲೆ, ಸಮುದ್ರಮಟ್ಟದಿಂದ 922' ಎತ್ತರದಲ್ಲಿದೆ. ಮರುಭೂಮಿ ಹಾಗೂ ಸವನ್ನ ಹುಲ್ಲುಗಾಡುಗಳ ನಡುವೆ ಸರೋವರ ಹಬ್ಬಿದೆ. ನೈಋತ್ಯ ಆಗ್ನೇಯ ದಿಕ್ಕುಗಳಿಂದ ಹಲವು ನದಿಗಳು ಸರೋವರದೊಳಕ್ಕೆ ಹರಿದು ಬರುತ್ತವೆ. ಅವುಗಳಲ್ಲಿ ಯೋಬೆ, ಶಾರಿ ನದಿಗಳು ಮುಖ್ಯವಾದವು. ಈ ನದಿಗಳು ಸೇರುವೆಡೆ ತೀರಗಳು ಸಮತಲವಾದ ಜವುಗು ಪ್ರದೇಶಗಳು. ಚಾಡ್ ಸರೋವರದಲ್ಲಿ ವಾಸ್ತವವಾಗಿ ಎರಡು ತಗ್ಗು ಪ್ರದೇಶಗಳು ಕೂಡುತ್ತವೆ. ಇವುಗಳ ನಡುವೆ ಒಂದು ಉದ್ದವಾದ ದಿಬ್ಬವುಂಟು. ಇದರಲ್ಲಿ ಒಂದು ನಾಲೆ ಹರಿಯುತ್ತದೆ. ಕಡಿಮೆ ಮಳೆ ಬೀಳುವುದರಿಂದ ಸರೋವರ ಯಾವಾಗಲೂ ತುಂಬಿರುವುದಿಲ್ಲ. ಉತ್ತರದ ಭಾಗ ಹೆಚ್ಚು ಆಳವಾದರೂ ಅದು ಯಾವಾಗಲಾದರೂ ಬತ್ತಿಹೋಗಬಹುದು. ಏಕೆಂದರೆ ಸರೋವರದ ನಡುವಣ ದಿಬ್ಬದಿಂದಾಗಿ ದಕ್ಷಿಣದ ನೀರು ಕಡೆಗೆ ಹರಿದು ಬರಲು ಅಡಚಣೆಯಾಗಿದೆ. ಬಾಷ್ಪೀಭವನದಿಂದ ಹಾಗೂ ಮರಳು ಬಂದು ತುಂಬಿಕೊಳ್ಳುವುದರಿಂದ ಈ ಸರೋವರವೇ ಸಂಪೂರ್ಣ ಬತ್ತಿಹೋಗುವ ಅಪಾಯವಿದೆಯೆಂದು ಭಾವಿಸಲಾಗಿದ್ದರೂ ಶಾರಿ ನದಿಯ ಪ್ರವಾಹದಿಂದಾಗಿ ಬಹುಶಃ ಹಾಗಾಗದು.

	ಈ ಸರೋವರದ ಆಳ ಮತ್ತು ವಿಸ್ತೀರ್ಣ ಬದಲಾಗುತ್ತಿರುತ್ತವೆ. ಗರಿಷ್ಠ ಆಳ 35'. ಅತ್ಯಂತ ಆಳವಾದ ಭಾಗವೂ ಕೆಲವು ಬಾರಿ ಒಣಗಿ ಹೋಗುವುದುಂಟು. ಶಾರಿ ನದಿಯ ಮುಖಪ್ರದೇಶ ಕ್ರಮಕ್ರಮವಾಗಿ ವಿಶಾಲವಾಗುತ್ತಿದೆ.

	ಚಾಡ್ ಸರೋವರದ ಇರವನ್ನು ಅವರಿವರ ವರದಿಗಳಿಂದ ಟಾಲವಿ ಅರಿತುಕೊಂಡಿದ್ದ. ಬಿಳಿಯರು ಇದನ್ನು ಮೊದಲು ಕಂಡದ್ದು 1823ರಲ್ಲಿ. ಇವರು ಟ್ರಿಪೋಲಿ ಮಾರ್ಗವಾಗಿ ಸರೋವರವನ್ನು ತಲುಪಿದರು. 1850ರಲ್ಲಿ ಜೇಮ್ಸ್ ರಿಚರ್ಡ್‍ಸನ್ ತನ್ನಿಬ್ಬರು ಸಂಗಾತಿಗಳೊಂದಿಗೆ ಇಲ್ಲಿಗೆ ಬಂದ. ಚಾಡ್, ಸರೋವರದ ಮೇಲೆ ಯಾನ ಮಾಡಿದ ಮೊತ್ತಮೊದಲ (1851) ನಾವಿಕ ಓವರ್‍ವೆಗ್. ಅನಂತರ 1855 ಮತ್ತು 1870ರಲ್ಲಿ ಅನುಕ್ರಮವಾಗಿ ಎಡ್ವರ್ಡ್ ವೊಗಲ್ ಮತ್ತು ಗುಸ್ತಾವ್ ಸ್ಯಾಕ್ಟಿಗಲ್ ಈ ಸರೋವರವನ್ನು ಸಂದರ್ಶಿಸಿದರು. ಸ್ಯಾಕ್ಟಿಗಲ್ ಈ ಸರೋವರದ ಜಲಶಾಸ್ತ್ರವನ್ನು ಅಭ್ಯಸಿಸಿದ. ಇದರಲ್ಲಿ ಅಪಾರ ಸಂಪತ್ತು ಇದೆಯೆಂಬ ನಂಬಿಕೆಯಿಂದಾಗಿ ಇದರ ಒಡೆತನಕ್ಕಾಗಿ ಯೂರೋಪಿನ ರಾಷ್ಟ್ರಗಳಲ್ಲಿ ಪೈಪೋಟಿ ಏರ್ಪಟ್ಟಿತು. 1890-93ರಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿಗಳು ಒಂದು ಒಪ್ಪಂದದ ಮೂಲಕ ಇದರ ತೀರಪ್ರದೇಶಗಳನ್ನು ಹಂಚಿಕೊಂಡವು. ಈ ರಾಷ್ಟ್ರಗಳಿಂದ ಮುಂದೆ ಈ ಭಾಗದ ಸಂಪೂರ್ಣ ಪರಿಶೋಧನೆ ನಡೆಯಿತು.

	ಈ ಸರೋವರದಲ್ಲಿ ಅನೇಕ ಚಿಕ್ಕಪುಟ್ಟ ದ್ವೀಪಗಳಿವೆ. ಇಲ್ಲಿ ಇರುವ ಯೆಡಿನೋ ಬುಡಕಟ್ಟಿನ ಜನ ಬೆಸ್ತರು. ದೋಣಿ ತಯಾರಿಸುವುದೂ ಜಾನುವಾರು ಸಾಕುವುದೂ ಇವರ ಕಸಬುಗಳು. ಮರಳಿನ ದಿಬ್ಬಗಳಲ್ಲಿ ಕೃಷಿಕರೂ ಗೊಲ್ಲರೂ ಇದ್ದಾರೆ.

	ಚಾಡ್ ಸರೋವರದಲ್ಲಿ ಮೀನುಗಳು ಸಮೃದ್ಧವಾಗಿ ಸಿಗುತ್ತವೆ. ಈ ಸರೋವರದ ಮೇಲೆ ಸಂಚಾರಕ್ಕೆ ಅಲೆಗಳೂ ಜಲಸಸ್ಯಗಳು ಅಡಚಣೆಗಳಾಗಿವೆ.								(ಎಚ್.ಜಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ